Wednesday, 28 August 2013

ನೀ ಬರುವ ತನಕ..........

ಇರುಳ ಮೂಲೆಯಲಿ ಖಾಲಿ ಹೃದಯ
ಹಾಡುತಿದೆ ಒಂಟಿ ರಾಗ
ರಾತ್ರಿಯಿಡೀ ಅಲೆಯುವ ಬಿಕಾರಿಚಂದ್ರನಂತೆ
ನೀ ಬರುವತನಕ ಯಾವೂದೂ ಬೆಳಗುವುದಿಲ್ಲ
ನನ್ನೆದೆ ನಭದ ಸೂರ್ಯನೂ ಕೂಡ
ಕತ್ತಲೆ ಹೊದ್ದು ಮಲಗಿದ್ದಾನೆ ಗ್ರಹಣ ಬಡಿದು

ನೀ ಬರುವತನಕ ಈ ಏಕಾಂತವು
ಮೈಮುರಿದೇಳದು ಸೋಮಾರಿ
ನನ್ನೊಳಗಿಹ ನಿನ್ನ ನೆನಪುಗಳ
ನೆರಳು ಬೆಳಕಿನಾಟದಲಿ
ಹೃದಯ ದಣಿದಿದೆ ಪ್ರೀತಿ ಹಸಿವಲಿ

ನೀ ಬರುವತನಕ ಮುರಿಯದು ಈ ಮೌನ
ಸುರಿಯದು ನೋವ ಕಣ್ಣೀರು
ನೀನಿಲ್ಲದೆ ನಾ ಒಂಟಿ ಎಂಬ ಭಾವವ
ನೀನುಳಿಸಿದೆ ನನ್ನೊಳಗೆ
ಅಗೋ ಅದು ಸುಡುತಿದೆ ಮನಸು ಕನಸುಗಳ
ಅಣಕಿಸುತಿದೆ ನಿನ್ನ ನಗು
ಈ ನನ್ನ ಅಸಹನೀಯ ಒಂಟಿತನವನು

ನೀ ಬರುವತನಕ ಕರಗದು ಈ ಕ್ರೂರ ಇರುಳು
ಬಾಹುಗಳಲಿ ಬಂದಿಸಿದೆ ನನ್ನ ಅಸ್ತಿತ್ವವ
ನಿನಗಾಗಿ ಕಾದಿಹ ಕಂಗಳ ಕಟ್ಟಿ
ಓ ಪ್ರೀತಿಯೇ ಕರುಣೆಯಿರಲಿ
ಈ ಹೃದಯ ನಿನ್ನ ಬಳಿ ಇದೆ
ಮರಳಿ ತಾ ನಿನ್ನ ಪ್ರೀತಿಯೊಂದಿಗೆ
ಇರುಳ ಕಳೆವ ನೇಸರನಂತೆ
ಉಳಿದಿಹ ನಿನ್ನ ಪ್ರೀತಿ ಕಾಳಜಿಗಳ
ತಿರುಗಿಸು ನನ್ನ ಮೌನದ ಕಡೆಗೆ
ಮೌನ ಮಾತಾಗಲಿ
ನೀ ಬರುವ ತನಕ..........

---------------------

"ಭಾವಕಣ"

Thursday, 22 August 2013

ಕಾಲಗರ್ಭ

ಕಾಲಗರ್ಭದ ಕೂಸು
ಹುಟ್ಟಿ ಬರುವುದು ನಾಳೆ
ಕಲಿಯ ಕುದುರೆ ಬೆನ್ನನೇರಿ
ಮಿಂಚು ಖಡ್ಗ ಹೊರೆಯಲಿರಿಸಿ
ಉರಿವ ರವಿಯ ಒಡಲಿನಿಂದ
ಹರನ ತಿರುಗಣ್ಣಿನಿಂದ
ಅಸಮಾನತೆಯ ನಡುಮುರಿದು
ಜಾತಿ ಜಗದ  ಕೊರಳ ಕಡಿದು
ಮನದಿ ಕವಿದ ಇರುಳ ತೊಡೆದು
ಮನ್ವಂತರದ ದೀಪ ಹಿಡಿದು
ಬೆಳಗುವುದು ಈ ನೆಲವ
ಮಾನವತೆಯ ಜಗದಲಿ.....


ಭಾವಕಣ...