ಬದುಕೆ ನೋಯುವೆಯೇಕೆ
ಇರುವುದೆಲ್ಲವ ನೆನೆದು
ಬಿಟ್ಟು ಹೋಗುವೆ ತಾನೆ ಪಡೆದುದೆಲ್ಲ
ದೇಹ ಕೊಟ್ಟವರಾರೊ
ಆತ್ಮನಿಟ್ಟವರಾರೊ
ಅನ್ನವಿಟ್ಟವರಾರೊ ಶಿವನೆ ಬಲ್ಲ
ಹುಟ್ಟು ಸಾವಿನ ನಡುವೆ
ಇರುವ ಬದುಕನು ಸವಿ
ಪ್ರೀತಿ ಮಾತ್ರವೇ ಇಲ್ಲಿ ಸಿಹಿಯ ಬೆಲ್ಲ
ರಾಗ ದ್ವೇಷವ ಸುಡು
ನಾನು ನನ್ನದು ಬಿಡು
ಹಸಿವಿಗನ್ನವ ಕೊಡು ಸುಖವೆ ಎಲ್ಲ
ಮನದ ನೆಲದೊಳು ನೆಟ್ಟ
ದುರಾಸೆ ಬೇಲಿಯ ಕಿಳು
ದುಃಖದ ಮೂಲವದು ಎಂದ ಬುದ್ಧ
ನೀನೇ ನಿನ್ನೆಯ ಗೆಳೆಯ
ಪಡೆ ನೀ ಆತ್ಮ ಶುದ್ಧಿಯ
ಹರನೇ ನಿನ್ನೊಳಗಿರುವ ಶತಃಸಿದ್ಧ
ಗುಡಿ,ಕಲ್ಲು,ಆಗಸದೊಳು
ದೇವರ ಹುಡುಕದಿರು
ನಿನ್ನಾತ್ಮವೇ ದೇವರು ಪರಮಸತ್ಯ
ಗಾಳಿ,ಮಳೆ ಬಯಲ್ಹಸಿರಲಿ
ಹೆತ್ತವರ ತ್ಯಾಗ ಮಮತೆಯಲಿ
ಶಿವನಿಹನು ಮರೆಯದಿರು ನೆನೆಯೋ ನಿತ್ಯ
ನೀನು ಬದುಕಿದ್ದರೆ ಜೀವ
ದೇಹ ತ್ಯೆಜಿಸಿದೆಯೋ ಶವ
ನಡುವಿರುವ ಬದುಕೆ ಪರಮಾತ್ಮಶಿವ
ಇರಲೆಲ್ಲಾ ಜೀವಿಯೊಳು ಕರುಣ
ಭೇಧ-ಭಾವವೇ ಮರಣ
ಬದುಕೆಲ್ಲದಕೂ ಹಿರಿದು ಅರಿವೇ ಶಿವ
-------------------------------------------------------
"ಭಾವಕಣ"