Monday, 6 January 2014

"ಬೆವರು-ಕಾರುಬಾರು"

ಇರೋನ್ಮನೇಲುರಿತಾವೆ
ಸೂರ್ಯನ್ನಾಚ್ಸೊ ಬೆಳ್ಕು
ಇಲ್ದೋನ್ಮನೆ ಗುಡಿಸ್ಲಲ್ಲಿ
ಎಣ್ಣೆ ದೀಪದ್ಮಿಣ್ಕು
ಬರ ಬಂದ್ರು ಮಳೆ ಹೋದ್ರು
ಸಿಕ್ತೈತಿವ್ರ್ಗೆ ಕೂಳು
ಬರಡು ನೆಲದಲ್ಬಡವನ್ಬೆವ್ರು
ಕೇಳೋರಿಲ್ಲ ಗೋಳು

ಚಳಿಗೆ ಮಳೆಗೆ ಕುಣ್ಯಾಕೈತೆ
ಪಬ್ಬು ಕ್ಲಬ್ಬು ಬಾರು
ಒಳ್ಗೆ ಬಿಸಿ ಆಗ್ತಾ ಐತೆ
ವಿದೇಸಿ ಪಿಜ್ಜಾ ಬರ್ಗರು
ಬಂತು ನೋಡು ಕೋಟಿ ಕಾರು
ಹಾರಿಸ್ಕಂಡು ರಸ್ತೆ ನೀರು
ಬಿಗ್ ಬಜಾರು ಪಿವಿಆರು
ಕುಡಿದವರ ಕಾರುಬಾರು

ತಿಂದಿದ್ನೆಲ್ಲ ಅರುಗ್ಸಕೆ
ಓಡ್ತಾ ಅವ್ನೆ ಧನಿಕ
ಅವ್ನ ಮೈಮ್ಯಾಲ್ಹೊಳೀತೈತೆ
ಬಾರಿ ದುಬಾರಿ ಕನಕ
ಹಸ್ದ ಹೊಟ್ಟೆ ಮುಂದಿಟ್ಕಂಡು
ದುಡಿತಾವ್ನೆ ಬಡ್ವ
ತೀರ್ಸಕಂತ ಅವ್ನಿಂದ
ಪಡ್ದ ಬಡ್ಡಿ ಸಾಲ್ವ

ಭಾವ ಭಾಸೆ ಒಂದೂ ಇಲ್ಲ
ಇಂಗ್ಲೀಸ್ ಟಸ್ಸು ಪುಸ್ಸು
ವಿದ್ಯೆನೆಲ್ಲ ಮಾರ್ಕಂಡವ್ರೆ
ಸಿಕ್ತೈತೆ ಕೊಟ್ರೆ ಕಾಸು
ಹತ್ತತ್ತಲ್ಮಾರ್ತಿನ್ನೋವಷ್ಠು
ದುಡ್ಬೇಕಿವ್ರೀಗ್ಯಾಕೆ
ಬ್ಯವ್ರಿನ್ದುಡ್ಮೆ ಬಡ್ವನ್ನುಡಿಗೆ
ಬ್ಯಾರೆ ಆಸೆ ಬೇಕೆ?

ಸಿರಿವಂತ್ರೆ ಸಿರಿತನ್ವು
ಹಣ್ದಾಗೆಂದು ಇಲ್ಲ
ತಕ್ಕೊಂಡ್ಹೋಗಾದೇನೈತಿಲ್ಲಿ
ಮಾನವತ್ಯೇ ಎಲ್ಲ
ಅವ್ನ ಬ್ಯವ್ರೆ ನಮ್ಗೆ ಅನ್ನ
ನೆನ್ಪಲ್ಲಿರ್ಲೊ ಅಣ್ಣ
ಸಮಾನತ್ಯೆ ನಮ್ಗಳ್ದರ್ಮ
ಆಗ್ಬುಟ್ರೆಸ್ಠು ಚೆನ್ನ

--------------------

"ಭಾವಕಣ"

"ಅವಳ ಮಾತು ಹೂನಗೆ"

ನಾನೆ ಜೀವ ನೀನೆ ಭಾವ
ಪ್ರೀತಿ ನಮ್ಮ ದೈವ
ಮಿಡಿವ ಎದೆಗೆ ನಿನದೆ ಹೆಸರ
ಪದವೆ ನಮ್ಮ ಕಾವ್ಯ

ಮಳೆಯ ಹನಿಗೆ ಇಳೆಯ ಬೆಸುಗೆ
ನದಿಗೆ ಕಡಲ ಧ್ಯಾನ
ಮಾಮರದಲಿ ಕೋಗಿಲೆಯ
ನವ ಚೈತ್ರದ ಗಾನ

ರವಿಗೆ ಕಮಲ ಶಶಿಗೆ ತಾರೆ
ಹೂವ ಜೇನು ದುಂಬಿಗೆ
ನನ್ನೆದೆಯ ಮೌನಗಳಿಗೆ
ಮಾತು ನಿನ್ನ ಹೂನಗೆ

----------------------

"ಭಾವಕಣ"

Sunday, 5 January 2014

"ಆಶಾಭಾವ"

ಭೂನೆಲದ ಒಡಲಿಂದ
ಬಂಧ ಕಳೆದಿದೆ ಹಳೆಮರ
ತನ್ನೊಡಲ ಬೇರಿಂದ
ಬೆಳೆಸಿ ಹೊಸ ಚಿಗುರ
ಮರದ ಎಲೆಮರೆ ಹಣ್ಣು
ನೆಲದೊಡಲ ಸೇರಲು
ಗರ್ಭ ಧರಿಸಿದೆ ಮಣ್ಣು
ಜೀವದುಸಿರನೆ ಹೆರಲು

ತನ್ನ ಜೀವಿತವ ಕಳೆದು
ನೆಲಕಿಳಿದ ಒಣ ಎಲೆಯು
ಕಣ್ಣಹನಿ ಮಿಡಿವುದೆ ಎಂದಾದರು
ತನ್ನ ಹಡೆದ ತಾಯ್ಮಡಿಲಲಿ ಕರಗಿ
ಬರುವ ನವ ಚಿಗುರನು
ಮರೆವುದೆ ಮುಂದಾದರು

ಮೋಡ ಕರಗಲು ಸುರಿವ
ಮಳೆಹನಿ ಬಿಕ್ಕುವುದೆ
ಮಡಿಲ ತೊರೆದೆನೆಂದು
ನೆಲಕಿಳಿದು ಹರಿಯುವುದು
ಸಂತಸದಿ ನದಿಯಾಗಿ
ಕಡಲ ಸೇರುವೆನೆಂದು

ರವಿಕಿರಣಗಳಿಗೆ ಹೊಳೆದು
ಅರಳಿ ನಗುವ ಹೂವುಗಳು
ಬಿಸಿಲೆಂದು ಮರುಗುವವೆ
ದೀಪವು ತಾನೇ ಉರಿದು
ಬೆಳಗಲು ಕಡುಕತ್ತಲೆಯ
ನೋವೆಂದು ನರಳುವವೆ

ಮನದ ನೋವುಗಳಿಗೆಲ್ಲ
ಇದೆ ಎದೆಯ ಸಾಂತ್ವಾನ
ಅನುಕ್ಷಣವು ನಮ್ಮೆದೆಯ ಬಡಿತದಲ್ಲಿ
ಅನುದಿನವು ನುಡಿಯುತ್ತಿಹ
ಉಸಿರಾಟವೇ ಬದುಕು
ಹೊಳೆಯಲಿ ಅದೆ ಎದೆಯ ಮಿಡಿತದಲ್ಲಿ

--------------------------------
."ಭಾವಕಣ"





"ಬಿಸಿಲ ಕೋಲು"

ಬಿಸಿಲ ಕೋಲ ಬೆಳಕೆಂದು ತಿಳಿದೆ
ಮನಕೆ ಕವಿದ ಇರುಳಲಿ
ಹಿಡಿಯಲಾರೆ ಕೈಗೆ ಸಿಗದು
ಎದೆಯ ಸೂರಿನಡಿಯಲಿ

ಬಾಳ ರವಿಯು ಮೂಡನೇಕೊ
ಮುನಿಸು ತೋರಿ ಹೊರಟನೊ
ಶಶಿಯ ಬೆಳಕ ಸುಳಿವೇ ಇಲ್ಲ
ಏಕೆ ಮೌನ ತಳೆದನೊ?

ವಿಷವುಂಡಿದೆ ಜೇನಹನಿ
ಸಿಹಿಯ ಸಾವಿನಲ್ಲಿ
ಕಡಲುಸಿರು ನಿಲ್ಲುತಿದೆ
ಅಲೆಯ ಮಿಡಿತವೆಲ್ಲಿ?

ಸ್ವರಗಳೊಡಲು ಸಿಡಿಯುತಿದೆ
ತಂತಿ ಹರಿದ ವೀಣೆ
ಪ್ರೀತಿ ಕವನ ಕರಗುತಿದೆ
ಮನದಿ ಮುದುಡಿ ಮೆಲ್ಲನೆ

----------------------
"ಭಾವಕಣ"

Saturday, 4 January 2014

"ಮುಂಗಾರು"

ಮಳೆಯೊಂದೆ ಹನಿನೂರು
ಜಗಜಾತ್ರೆಗೆ ಭುವಿತೇರು
ನಸುನಗುತಲಿ ಮುಂಗಾರು
ನಲಿಸಿದೆ ಎದೆ ಪ್ರೀತಿಯೂರು

ಮೊದಲ ಮಳೆಯ ಹಾಡಿಗಿಲ್ಲಿ
ಗುಡುಗು ಮಿಂಚು ಮೇಳವಲ್ಲಿ
ಘಮ್ಮೆನುತಿರೆ ಭುವಿಯೊಡಲು
ನದಿ ಸೇರಿದೆ ಪ್ರೀತಿ ಕಡಲು

ಸುರಿವ ಸೋನೆ ಹಾಡಿಗೆ
ಹಸಿರ ಜನನ ಕಾಡಿಗೆ
ಝರಿ ಚೆಲ್ಲಿವೆ ಹಾಲನೊರೆ
ಪ್ರಕೃತಿಯು ಹಸಿರು ನೀರೆ

ಮಳೆ ಚೆನ್ನ,ಹೊಳೆ ಚೆನ್ನ
ಬೆಳೆ ಅನ್ನ,ಇಳೆ ಚಿನ್ನ
ಮುಂಗಾರಿನೊಡಲಿನೊಳು
ಮಿಂದೇಳಲು ನೆಲ-ಮನ


-------------------------------
"ಭಾವಕಣ"




Friday, 3 January 2014

"ಹೊಸ ವರುಷ"

ಎಲ್ಲರಿಗೂ,ಎಲ್ಲದಕೂ ಬೇಕು
ಹೊಸತನ ಹೊಸ ಸಂವತ್ಸರ
ಹಳೆದಿನವ ಮರೆಯಲು
ಹೊಸತನವ ಮೆರೆಸಲು
ಇದೊಂದು ಸವಿವೇದಿಕೆ
ಎಲ್ಲವೂ ಬಯಸಿದೆ
ಹೊಸತನದ ಹೊದಿಕೆ

ಮರದ ಹಣ್ಣೆಲೆಯುದುರಿ
ನೆಲದಿ ಕರಗಿ
ಹಳೆಬಸಿರಲಿ ಹೊಸಚಿಗುರಿನ
ಮಿಂಚು ಮಿನುಗಿ
ಬಿರು ಬಿಸಿಲಲು ವಸಂತನ
ಕೋಗಿಲೆಗಾನ
ಹೊಸ ಋತುವಲಿ ಭೂರಮೆಗೆ
ಇಬ್ಬನಿ ಸ್ನಾನ

ಮುಂಗಾರಿಗೆ ವೇದಿಕೆಯಿದು
ಮೊದಲ ಮಳೆಯ ಹಾಡಿಗೆ
ಒಣ ಬೀಜಕೂ  ಮೊಳಕೆ ಭಾಗ್ಯ
ವಿಸ್ಮಯ ಪ್ರಕೃತಿ ಕೊಡುಗೆ
ಭುವಿಯೆಲ್ಲವೂ ಹಸಿರುಟ್ಟಿದೆ
ಮಧು ಮಗಳಿಗೆ ಸಿಂಗಾರ
ಉದಯಿಪ ರವಿಕಿರಣಗಳು
ಬೀರಿವೆ ಬೆಳಕ ಬಂಗಾರ

ವರುಷ ಕಳೆದರೂ ವರುಷ
ಬಂದಿದೆ ಹೊಸವರುಷ
ಹಸಿರುಸಿರಲಿ ಮನೆಮನದಲಿ
ತಂದಿದೆ ನವ ಹರುಷ
ಕಳೆದವುಗಳು ಕಹಿನೆನಪು
ಮರೆಯಾಗಲಿ ನೋವು
ಎಳೆಮನದಲಿ ಹಳೆನೆಲದಲಿ
ಅರಳಲಿ ನಗು-ಹೂವು

--------------------------
"ಭಾವಕಣ"