Monday, 25 April 2016

"ಯಶದ ಹಾದಿ"

ಯಶಸ್ಸಿಗಿಹುದೆ ಅಡ್ಡ ಹಾದಿ
ಪೂಜೆ ಹರಕೆಗಳ ಗೊಡವೆ
ಸಾಗಬೇಕು ಎಲ್ಲ ಮೀರಿ ಗುರಿಯ ಕಡೆಗೆ
ಆತ್ಮದ್ವಿಶ್ವಾಸವೇ ಬೆಳಕು
ನಂಬಿಕೆಯೆ ನಿಜದೈವ
ಏಳು-ಬೀಳು-ನೋವೆಲ್ಲಾ ಕ್ಷಣದ ಉಡುಗೆ

ಉರಿವ ಬೇಸಿಗೆಯಲೂ
ಚಿಗುರುವ ಮರಗಿಡಗಳು
ಕಷ್ಟದಲೂ ನಗುತ್ತವೆ-ವಾಸ್ತವತೆ
ಭುವಿಯ ಗರ್ಭದೊಳಗೆ
ಸುಡುವಗ್ನಿ ಜ್ವಾಲೆಗಳಿದ್ದರು
ಬಿತ್ತಿದೊಡೆ ಬೆಳೆಯುವಳು ಜೀವಸತ್ವತೆ

ಹಸಿವಿದ್ದರೂ ತೋರಿಸಳು
ಹಸುಳೆಗನ್ನ ನೀಡುವಳು
ಹಸಿವಿಲ್ಲವೆನುವ ತಾಯಿ ಬದುಕ ಸ್ಪೂರ್ತಿ
ಉರಿವ ಕುಲುಮೆಯೊಳಗೆ
ಕುದಿದರಲ್ಲವೆ ಹದದಿ
ಬಂಗಾರದೊಡವೆಗೂ ಒಂದು ಕೀರ್ತಿ

ಸಂಜೆ ಸರಿವ ಸೂರ್ಯ ಮತ್ತೆ
ಹಗಲಾಗುತ ಬೆಳಗುವನು
ಕತ್ತಲೆಯೇ ಕೊನೆಯಲ್ಲ ಬೆಳಕು ಶಾಶ್ವತ
ಎಲ್ಲದಕೂ ಇದೆಬಾಳು
ಎಲ್ಲರಿಗೂ ಇದೆಗೋಳು
ಸೋತವರೇ ಗೆಲ್ಲುವುದು ಎಂದೂ ನಿಶ್ಚಿತ

ಬದುಕ ಬುತ್ತಿಯ ಒಳಗೆ
ಎಲ್ಲರಿಗೂ ಇದೆ ತುತ್ತು
ಗೆಲ್ಲಲೇಬಹುದಿಲ್ಲಿ ನಂಬಿ ನಡೆದರೆ ಮಾತ್ರ
ಬಿದ್ದರಲ್ಲವೆ ನಿಲ್ವುದು
ನಿಂತರಲ್ಲವೆ ನಡೆವುದು
ನಡೆವವನೇ ಓಡುವುದು-ಬದುಕಸೂತ್ರ

---------------------------------------
                  "ಭಾವಕಣ"

"ಅವಳ ಕವಿತೆ"

ನಿನ್ನ ಕಿರುಬೆರಳ ಹಿಡಿದು
ಬದುಕ ದಾರಿಯಲಿ ನಾನು
ಸಾವಿರ ನೆನಪುಗಳಿಗೆ ಹೆಗಲಾಗಬೇಕಿದೆ
ಪದೇ-ಪದೇ ನಿನ್ನ ರೇಗಿಸಿ
ಮೂಡಿದ ಹುಸಿ ಕೋಪವನು
ಹಸಿ ಮುತ್ತಲ್ಲಿ ನಾ ಮರೆಸಬೇಕಿದೆ

ನನ ಕಣ್ಣಲಿ ದೂಳೆಂದು ನಟಿಸಿ
ಅದ ನೀನೂದಲು ಬಂದಾಗ
ಕೆಂಪಾದ ಕೆಂದುಟಿಗೆ ಮುತ್ತಿಡುವೆ
ನಾಚಿ ನೀನೆದೆಗೊರಗು
ಮಿಡಿತಗಳೆ ಮೃಷ್ಠಾನ್ನ
ಪ್ರೀತಿಯನೆ ಬೆರೆಸಿ ತುತ್ತಿಡುವೆ

ಅಂದು ರಾತ್ರಿಯ ತುಂಬಾ
ಎರಡು ಚಂದ್ರನ ಬಿಂಬ
ಆಗಸದಿ ಒಂದು ನಿನ್ನ ಮುಖವೊಂದು
ನಮ್ಮೆದೆ ಬಡಿತದ ಸದ್ದು
ಮುತ್ತು ಮುತ್ತನೆ ಮೆದ್ದು
ಹಸಿವ ನೀಗಿಸಿತು ನಿನ್ನ ನಗುವೊಂದು

ಏನು ಮಾಡಲಿ ಹೇಳು
ನಿದಿರೆ ಕದ್ದಿಹೆ ನೀನು
ಹಗಲಿರುಳ ಪರಿವಿರದ ವಿರಹಿಬಾಳು
ನನ್ನ ಮಾತನೇ ಕೇಳು
ಎಲ್ಲಾ ಮರೆಸುವೆ ನಾನು
ನೀನೆನಗೆ ನಾನಿನಗೆ ತಂಪುನೆರಳು

---------------------------------------
                                    "ಭಾವಕಣ"

Thursday, 14 April 2016

ಜೈ ಭೀಮ

ಶತ ಶತಮಾನಗಳ ನೋವುಂಡ
ಮಾನವತೆಯ ಗರ್ಭದಿಂದ
ಸಿಡಿದು ಬೆಳಗಿದ ಸೂರ್ಯ ಜೈಭೀಮ
ಭಾರತಾಂಭೆಯ ಒಡಲ
ನವ ಮನ್ವಂತರದ ಸಿಡಿಲು
ಸಮಾನತೆಯ ಸರದಾರ ಜೈಭೀಮ

ಅಸಮಾನತೆಯುರಿಯೊಳು
ತಾಯಿಭಾರತಿಯುರಿಯೆ
ಸಂತೈಸಲುದಯಿಸಿದ ಭುವಿಯ ಬೆಳಕೆ
ನೊಂದು ಸೋತವರ ಮಡಿಲು
ಅತ್ತು ಹಸಿದವರ ನೆರಳು
ಗೌತಮನ ಪ್ರತಿರೂಪ ನೀನು ಜಗಕೆ

ನೀ ನಡೆದ ಹಾದಿಯಲಿ
ಮಾನವತೆಯ ಮರಗಳೆದ್ದು
ಸಮಾನತೆಯ ನೆರಳನ್ನು ಸೂಸುತ್ತಿವೆ
ನಿನ್ನ ಅಧಮ್ಯ ಚಿಂತನೆಗಳು
ನಮ್ಮ ಹೃದಯಗಳನ್ನು
ಭೀಮ ಜ್ಯೋತಿಗಳಾಗಿ ಬೆಳಗುತ್ತಿವೆ

ಜಾತಿ-ಮತದ ಹೆಸರಲರಿದ
ಕಡುರುದಿರದ ಕಲೆಗಳಳಿಸಿ
ಸಾಂತ್ವಾನದ ಹೆಗಲಾದ ಪ್ರೀತಿ ಸಿಂಚನವೆ
ಮಾನವತೆಯ ಶ್ರೇಷ್ಠತೆಯನು
ಜಗದಗಲಕೂ ಬೆಳಗಿಸಿದ
ಸಮ ಸಂವಿಧಾನದ ಜೀವ ಚೇತನವೆ

---------------------------------------
                                 "ಜೀವಕಣ"