Friday, 11 April 2014

"ಮನ್ವಂತರ"

ಎಲೇ ಕೊಳಕು ಮನಸುಗಳೆ
ಇಂದಿಗೇ ಬಿಟ್ಟು ಬಿಡಿ
ನಿಮ್ಮೆಲ್ಲಾ ಹೊಲಸುಗಳ
ಅಂತರಂಗದಿ ನಾರುತ್ತಿದೆ
ಅಮಾನವತೆಯ ರಾಡಿ
ದ್ವೇಷಸೂಯೆಗಳೆಂಬ
ಹುಳುಕಿನೊಡಗೂಡಿ

ಮನಕೆ ಸಂಕೋಲೆಗಳ ಕಟ್ಟಿ
ಸಮಸಮಾಜವ ಬಂಧಿಸಿದವರೆ
ಅನಾಚಾರಗಳನ್ನೇ ಕೃತಿಯಾಗಿಸಿ
ಸುಸಂಸ್ಕೃತಿ ಎಂದವರೆ
ಸಾಕಿನ್ನು ನಿಲ್ಲಿಸಿ ಸ್ವಾರ್ಥದಡುಗೆಯ
ನೀವುಂಡು ನಮಗೀಯದಿರಿ
ಸಹಬಾಳ್ವೆಯ ಕೆಡಿಸದಿರಿ
ಒಗ್ಗಟ್ಟಿನೊಡಲಿಗೆ ವಿಷವೂಡದಿರಿ

ಗಟಗಟನೆ ರಕ್ತ ಹೀರುತ್ತಿದೆ
ಬೆನ್ನಿಗೆ ಹಾಕಿದ ಚೂರಿ
ನಂಬಿಕೆ ದ್ರೋಹಿಗಳೇ
ಗುಬ್ಬಿಯ ಮೇಲಲ್ಲವೇ ಬ್ರಹ್ಮಾಸ್ತ್ರ
ಒತ್ತೆಯಾಗಿಸಿದ್ದೀರಿ ಶಸ್ತ್ರಗಳ
ಮೇಲೆರಗಬಾರದೆಂದು
ತೊಡೆ ಮುರಿಯಬಾರದೆಂದು

ಇನ್ನೆಷ್ಠು ದಿನಗಳು ತಾನೆ ?
ಕತ್ತಲಿಳಿದು ಬೆಳಕರಿವತನಕ
ನೀವೇ ಬಿತ್ತಿದ ಅಸಮಾನತೆಯ
ವಿಷಬೀಜಗಳು ಬೆಳೆದು
ನಿಮಗೇ ಅನ್ನವಾಗುತ್ತವೆ
ಧರ್ಮ ಸಾಮ್ರಾಜ್ಯದ ಸುಳ್ಳು
ಸಿಂಹಾಸನಗಳು ತುಕ್ಕಾಗುತ್ತವೆ
ಜಾತಿಮತಪಂಥಗಳಳಿಯುತ್ತವೆ
ಕಾಲದ ಕಿಚ್ಚಿನುರಿಯಲಿ
ಹೊಸ ಮನ್ವಂತರಕೆ ನಾಂದಿಹಾಡುತ

---------------------------------------
"ಭಾವಕಣ"

Sunday, 6 April 2014

"ಮೌನ-ಮಂಥನ"

ಒತ್ತರಿಸಿ ಬಂದೆದೆಯ ಅಳುವ ನುಂಗಿ
ಪಧ್ಯ ಗೀಚುತಿಹೆ ಪದವ ಹೊಸೆದು
ನನ್ನ ಕವಿತೆಯನೋದಿ ನನ ಕಣ್ಣೆ ಹನಿಯುತಿವೆ
ಸನಿಹವಿಲ್ಲದ ನಿನ್ನ ನಗುವ ನೆನೆದು

ಒಡಲ ಪಿಸುಮಾತುಗಳ ಅರಿಯಲಾಗದ ನೀನು
ಮನದ ಮಾತು ಕೇಳಬಲ್ಲೆಯ
ಶಿಲೆಯೆದೆಯ ಮೌನ ಮಾತಾಗಿ ಹನಿಯಬೇಕು
ಕಾರ್ಮೋಡ ಚೆಲ್ಲೆ ಹನಿಯ

ನಿನ ನೆನಪು ಕಡೆಗೋಲು ಮಥಿಸುತಿದೆ ಎದೆಯ
ಇತಿಮಿತಿಯಿಲ್ಲದ ಪಥದಿ
ಕಂಪಿಸುತಿದೆ ಎದೆ ಸೋತು ತಂಪೆರೆಯದೀ ಪ್ರೀತಿಯಲಿ
ಹನಿ ಕಾಯ್ದ ನೆಲದ ತೆರದಿ

ಒಲೆಯ ಮೇಲಿನ ಮಡಕೆ  ತೆಗೆಯಬೇಡ ಬೇಗ
ಅನ್ನವಾಗಲಿ ಹಸಿವಿಗೆ
ಬೆಂಕಿಯೊಳಗಣ ಚಿನ್ನ ಕರಗಲಿ ಬಿಡು ಅದು
ಒಡವೆ ನಿನ್ನ ಮುದ್ದುಕಿವಿಗೆ

ಕಾಲಕಳೆದರೂ ಹೊಸತು ಹಳತಲ್ಲ ನಿನ್ನೊಲವು
ನವತನುವ ಚೆಲುವು
ನಲಿದ ಘಳಿಗೆಗಳನೆಲ್ಲ ಮರೆಯಲೊಲ್ಲದು ಮನವು
ನೀನಿರದೆಲೆ ಉಂಟೆ ಗೆಲುವು
------------------------------------------
"ಭಾವಕಣ"

"ಕತ್ತಿ-ಕಾಯಕ"

ಹಾಸುಗಲ್ಲಿನ ಮೇಲೆ ಹೊರಳುತ್ತಿದೆ ಕತ್ತಿ
ಬುಸುಗುಡುತ್ತಾ ಹಲ್ಲು ಮಸೆಯುತ್ತಾ
ಕುರಿಮಂದೆಗೆ ಗೊತ್ತೆ ಕೊರಳ ಬಗೆವರೆಂದು
ಮೇವನುಣುತ್ತದೆ ಮುದದಿ
ಜಗದ ಚಿಂತೆಯ ಮರೆತು
ಹಾಲನುಣಿಸುತ್ತದೆ ಮರಿಗೆ
ಎಲ್ಲರೊಳು ಬೆರೆತು

ಕಣ್ಣೆದುರೇ ಎಳೆದೊಯ್ದರೂ
ಎದೆಬಗೆಯಲು ತನ್ನವರ
ವಿರೋಧವಿಲ್ಲ ತಡೆಯುವುದಿಲ್ಲ
ತನ್ನದೇ ನೆತ್ತರು ಹರಿದರು
ಕೊರಳೊಡ್ಡುತ್ತದೆ ಯೋಗಿಯಂತೆ
ಕತ್ತಿ ರಕ್ಕಸನ ಬಾಯ್ಗೆ
ಕಡು ರುದಿರದಭಿಷೇಕ
ಕಟುಕ ಯಮನ ಕೈಗೆ

ಲೆಕ್ಕವಿರದಷ್ಠು ಜೀವನುಂಗಿದ ಕತ್ತಿ
ಅಳುಕಿಲ್ಲದೆ ನಿಲ್ಲುತ್ತದೆ ತಲೆಯೆತ್ತಿ
ಸ್ವರ್ಗಕ್ಕೋ ? ನರಕಕ್ಕೋ ?
ಜೀವಕಳಿಸಿದ ಪುಣ್ಯ ಅದಕೆ
ಕತ್ತಿಗೇನು ಕೋಪವೇ ?
ಕುರಿಯ ಕೊರಳ ಮೇಲೆ
ಕಟುಗವನ ಧರ್ಮ !
ತಿಂಬೊಗವನ ಧರ್ಮ !

ಮತ್ತದೇ ಕಾಯಕ ಕತ್ತಿಯದು
ಹಾಸುಗಲ್ಲಿನ ಮೇಲೆ ಹೊರಳಾಡಿ
ಹೊಳೆದು ಚೂಪಾಗಿ
ಮತ್ತೆ ಸಿದ್ಧವಾಗುತ್ತದೆ
ಕೊರಳ ಹರಿಯಲು
ಸ್ವರ್ಗಕ್ಕೋ ? ನರಕಕ್ಕೋ ? ಜೀವ !

-----------------------------------
"ಭಾವಕಣ"

Friday, 4 April 2014

"ಆತ್ಮಾವಲೋಕನ"

ಓ ಮನಸೇ ಸಹಿಸಿದ್ದು ಸಾಕಿನ್ನು
ಸರಿಸಿಬಿಡು ಮನದ ಕೊಳಕುಗಳ
ಶುದ್ಧಿಯಾಗಬೇಕಿದೆ ಅಂತರಂಗ
ಅರಿವಿನ ಮಳೆ ಸುರಿದು
ತೊಳೆಯಬೇಕಿದೆ ಕೊಳೆಯ
ಒಂದಷ್ಠೂ ಬಿಡದಂತೆ

ಬುದ್ದಿಯು ತಾನೇ ಆಳುತಿದೆ
ನಿನ್ನಂತರಾಳವ ಲಗಾಮು ಹಿಡಿದು
ಅಶುದ್ಧ ಆಲೋಚನೆಗಳು
ತೂರಿ ಬರುತ್ತವೆ ತಲೆಯೊಳಗೆ
ಬಹಿರಂಗವನ್ನಷ್ಠೇ ಹೊಳೆಸಿ
ಅಂತರಂಗದಿ ಹುಳುಕನುಳಿಸಿ

ನೀ ಬೇಡವೆಂದರೂ ಬುದ್ಧಿ ಬಿಡದು
ಜ್ಞಾನವನಳಿದು ಅಜ್ಞಾನವನಪ್ಪುತ್ತದೆ
ಕಂಡಿದ್ದೇ ಸತ್ಯವೆನ್ನುತ್ತದೆ
ಪ್ರಮಾಣಿಸುವ ನಿನ್ನ ಕಂಗಳ ಕಟ್ಟಿ
ತುಂಬಿದೆ ನಿನ್ನೊಳಗೆ ಕಲ್ಮಶಗಳ
ಲೋಭ ಮೋಹ ಕ್ರೋಧಸೂಯೆಗಳ
ತನ್ನಂತೆಯೇ ಬದಲಿಸ ಹೊರಟಿದೆ ನಿನ್ನನು
ಪ್ರೀತಿ ಸಂಬಂಧಗಳಿಗೆ ಬೆಲೆ ಕಟ್ಟುತ್ತದೆ
ಲೆಕ್ಕಾಚಾರದ ತಕ್ಕಡಿಯಲಿಟ್ಟು

ನೀನೆಷ್ಠು ಸಹಿಸುವೆ ನೋವುಗಳ
ಹೃದಯಾಘಾತವಾಗಬಹುದು
ಒಡೆದುಬಿಡು ತಡೆಯಬೇಡ
ಕಣ್ಣೀರ ಪ್ರವಾಹವೇ ಬರಬಹುದು
ಕ್ಷಮಿಸಿಬಿಡು ಮನವೇ
ನಿನಗೆ ನೋವನಿತ್ತ ನನ್ನನು
ತೊಡೆದುಬಿಡು ಕತ್ತಲೆಯ
ನಿನ್ನ ಕಿಡಿಯಿಂದ
ಬರಬೇಕಿದೆ ಬೆಳಕು
ಬದುಕಬೇಕಿದೆ ಬದುಕು

---------------------------------------
"ಭಾವಕಣ"