Friday, 24 February 2023

"ಸರ್ವೇಜನ ಸುಖಿನೋಭವಂತು"

ಬುಗುರಿಯ ತಿರುಗಂತೆ ಬದುಕು ಅದರ ಚಾಟಿಯನಿಡಿದಿಹ ದೇವ ತಿರುಗು ಚಲನೆಯೇ ಜೀವ ನಿಂತರದಂತ್ಯವದು,ಬಾಳಿಷ್ಠೆ! ಅದರಿಂದ ಕೇಳ್ ಇರುವಾಗ ಮೆರೆಯದೆಲೇ,ಉರಿಯದೆಲೇ ಪ್ರೀತಿ,ಕಾರುಣ್ಯದೊಳು ಮುಳುಗಬೇಕು ಸತ್ತರೂ ಜಗದಿ ನೀಂ ಬದುಕಬೇಕು ********* ಬದುಕದು ಸುಮ್ಮನೆಯೇ ದಿನ-ದಿನವ ದೂಡಲಲ್ಲವದು ಸದಾ ನೊಂದವರ ನೆರಳಾಗಲೋಸುಗ. ಶಿವ ಕೊಟ್ಟ ಕಾಯಕವೆಂದರಿತು ಹೆಳವರ,ಹಿರಿಯರ,ಗುರು ತಾಯ್ತಂದೆಯರ ಸೇವೆಗರ್ಪಿಸಬೇಕು ತನುಮನವ ಸಾರ್ಥಕವಾಗಿಸಬೇಕು ಜೀವನವ ************* ಜ್ಞಾನಿಯಾಗಬೇಕು ಇದನರಿತು ಕೇಳು ಪರಹೆಣ್ಣ ತಾಯಂತೆ,ಪರಸೊತ್ತ ಮಣ್ಣಂತೆ ಜನಿಪೆಲ್ಲಾ ಜೀವಗಳನು ತನ್ನಂತೆಯೇ ಬಗೆದು ಬೀಳದಿರು ಮೋಹ-ದುರಾಸೆಯ ಕೆಸರೊಳು ತಾಯ್ನಾಡ ಪ್ರೇಮ,ಹೊತ್ತ ನೆಲ ಪ್ರೇಮ ಹೆತ್ತು ಸಲಹಿದ ಪ್ರೇಮಂಗಳ ಮರೆಯದೆ ಉಂಡಟ್ಟಿಗೆರಡು ಬಗೆಯದೆ ನಂಬುಗೆಯ ಬೆನ್ನಿಗಿರಿಯದೇ ಬದುಕು ಅದೇ ಬಾಳ ರಹಸ್ಯವೆಂದು ತಿಳಿದು *********** ನ್ಯಾಯದಾದಿಯೊಳು ಕಾಯಕವು ನಿನದಿರಲಿ ಫಲದ ಹಂಗನೆಂದೂ ಎಣಿಸದೆ ನೀ ಇಡು ಅದ ಶಿವನ ಪಾದ ಪದ್ಮಗಳಿಗೆ ನಿಜ ನೀಡುವ ಕೇಳ್ ಕಾಯಕಫಲದಮೃತವ! ಕುಂದದಿರು ಕಷ್ಠಾನಷ್ಠನೋವುಗಳೆಂದು ಕುಲುಮೆಯೊಳು ಬದುಕೆಂಬೋ ಚಿನ್ನವ ಕುದಿಸಿ ಬಂಗಾರದೊಡವೆಯಾಗಿಸುತಿಹ ಶಿವನು ಇರುಳಂತೆ ಮರೆಯಾಗಿ,ಬೆಳಕಂತೆ ತಾ ಮೂಡಿ ನಗುವರಳಿಸುವ ದಿಟದಿ ನಂಬು ಜೀವ ನಿನ್ನೊಳಗೆ ನೀಂ ಪರಮಾತ್ಮನರಿಯುತಲಿ ಆತ್ಮಶುದ್ಧಿಯಾಗಲಿ ಸಖಲರಾತ್ಮದೊಳು ಪರಮಾತ್ಮನೇ ನೆಲೆಸಲಿ ಸರ್ವೇಜನೋಸುಖಿನೋಭವಂತು ---------------------------------- *ಭಾವಕಣ*

Saturday, 16 May 2020

"ಬದುಕೆ ನೋಯದಿರು"

ಬದುಕೆ ನೋಯುವೆಯೇಕೆ
ಇರುವುದೆಲ್ಲವ ನೆನೆದು
ಬಿಟ್ಟು ಹೋಗುವೆ ತಾನೆ ಪಡೆದುದೆಲ್ಲ
ದೇಹ ಕೊಟ್ಟವರಾರೊ
ಆತ್ಮನಿಟ್ಟವರಾರೊ
ಅನ್ನವಿಟ್ಟವರಾರೊ ಶಿವನೆ ಬಲ್ಲ

ಹುಟ್ಟು ಸಾವಿನ ನಡುವೆ
ಇರುವ ಬದುಕನು ಸವಿ
ಪ್ರೀತಿ ಮಾತ್ರವೇ ಇಲ್ಲಿ ಸಿಹಿಯ ಬೆಲ್ಲ
ರಾಗ ದ್ವೇಷವ ಸುಡು
ನಾನು ನನ್ನದು ಬಿಡು
ಹಸಿವಿಗನ್ನವ ಕೊಡು ಸುಖವೆ ಎಲ್ಲ

ಮನದ ನೆಲದೊಳು ನೆಟ್ಟ
ದುರಾಸೆ ಬೇಲಿಯ ಕಿಳು
ದುಃಖದ ಮೂಲವದು ಎಂದ ಬುದ್ಧ 
ನೀನೇ ನಿನ್ನೆಯ ಗೆಳೆಯ
ಪಡೆ ನೀ ಆತ್ಮ ಶುದ್ಧಿಯ
ಹರನೇ ನಿನ್ನೊಳಗಿರುವ ಶತಃಸಿದ್ಧ

ಗುಡಿ,ಕಲ್ಲು,ಆಗಸದೊಳು
ದೇವರ ಹುಡುಕದಿರು
ನಿನ್ನಾತ್ಮವೇ ದೇವರು ಪರಮಸತ್ಯ
ಗಾಳಿ,ಮಳೆ ಬಯಲ್ಹಸಿರಲಿ
ಹೆತ್ತವರ ತ್ಯಾಗ ಮಮತೆಯಲಿ
ಶಿವನಿಹನು ಮರೆಯದಿರು ನೆನೆಯೋ ನಿತ್ಯ

ನೀನು ಬದುಕಿದ್ದರೆ ಜೀವ
ದೇಹ ತ್ಯೆಜಿಸಿದೆಯೋ ಶವ
ನಡುವಿರುವ ಬದುಕೆ ಪರಮಾತ್ಮಶಿವ
ಇರಲೆಲ್ಲಾ ಜೀವಿಯೊಳು ಕರುಣ
ಭೇಧ-ಭಾವವೇ ಮರಣ
ಬದುಕೆಲ್ಲದಕೂ ಹಿರಿದು ಅರಿವೇ ಶಿವ

-------------------------------------------------------
                                     "ಭಾವಕಣ"

Saturday, 18 May 2019

"ನನ್ನಣ್ಣ"

ಅಣ್ಣ ನಿನ್ನ ಬೆನ್ನ ಹಿಂದೆ
ಬಿದ್ದ ಬೀಜ ನಾನು
ನೀನು ಮರ ನಾನು ಬಳ್ಳಿ
ನನ್ನಾಸರೆ ನೀನು
ನೀನುಣದೆ ಅಮ್ಮನೆದೆಯ
ನನಗೆ ನೀಡಿದೆ
ತೊಟ್ಟಿಲಲ್ಲಿ ನನ್ನ ನಗಿಸಿ
ಲಾಲಿ ಹಾಡಿದೆ

ಅಮ್ಮನಂತೆ ನೀನು ಕೊಟ್ಟ
ಕೈಯ ತುತ್ತಿನೂಟ
ನಿನ್ನ ಹೆಗಲ ಮೇಲೆ ನನ್ನ
 ಉಪ್ಪು ಮೂಟೆಯಾಟ
ನನಗೆ ಹೊದಿಸಿ ಚಳಿಗೆ ನಡುಗಿ
ನೀನು ಕಳೆದ ದಿನಗಳು
ನಿನ್ನ ಕರುಣೆ,ಮಮತೆಯೆದುರು
ಶರಣು ನಮ್ಮ ಮನಗಳು

ತಂದೆಯಾದೆ ಬದುಕಿನಲ್ಲಿ
ನೀನೆ ದಾರಿದೀಪ
ಮನವ ಮನಕೆ ಬೆಸೆದ ಬಂಧ
ಮನಗಳ ಪ್ರದೀಪ
ನಿನ್ನ ತ್ಯಾಗ ಅಮ್ಮನಷ್ಠೇ
ತೂಗುವುದು ತಕ್ಕಡಿ
ಬದುಕಿಗೊಂದು ಅರ್ಥಕೊಟ್ಟು
ಬರೆದೆ ನೀನು ಮುನ್ನುಡಿ

ಶಿವನ ಕಾಣೆ ಎಂದೂ ನಾನು
ನೀನೆ ಅವನ ರೂಪವು
ನೋವನುಂಡು ನಗುವ ನಿನ್ನ
ಪ್ರೀತಿಯೇ ಅಪರೂಪವು
ಬರುವ ಜನುಮಗಳಲೂ ನೀನೆ
ಪ್ರೀತಿ ದೇವರಾಗಿರು
ಗುಟುಕು ನೀಡು ನಾವು ಹಕ್ಕಿ
ಮಮತೆಯ ಗೂಡಾಗಿರು

-------------------------------------------------------------------

                             "ಭಾವಕಣ"

Monday, 3 September 2018

"ವಸ ದರ್ಮ"

ಹಳೇ ಯಕ್ಡ ತಕ್ಕಂಡ್ವಡಿರಿ
ವಸ ದರ್ಮುದ್ಮಕ್ಳಿಗೆ
ಮಕ ಮೂತಿ ಕಿತ್ತೋಗ್ಬೇಕು
ಗುರ್ತೇ ಸಿಗ್ದಂಗೆ
ಇರೋ ದರ್ಮ್ಗಳಾವಳಿನೇ
ತಡ್ಯಕಾಯ್ತಿಲ್ಲ
ಇನ್ನು ಬ್ಯಾರೆ ದರ್ಮ ಬೇಕಂತಿವ್ರ್ಗೆ
ಬುದ್ದಿ ನ್ಯಟ್ಗಿಲ್ಲ

ಇರೋ ಜಾತ್ಯವ್ರೆಲ್ಲಾ ಒಂದೊಂದು
ದರ್ಮ ಮಾಡ್ಕಳಿ
ಆಮ್ಯಾಲೆ ನಮ್ದರ್ಮಾನೆ ಸ್ರೇಸ್ಠ
ಅಂತ ಕತ್ತಿ ಹಿಡ್ಕಳಿ
ಬೀದಿ ಕೇರಿ ಓಣಿಲೆಲ್ಲಾ
ರಕ್ತ ಹರೀಲಿ
ದರ್ಮ ವಡ್ಯಾಕ್ನಿಂತ ದೆವ್ಗಳು
ವಟ್ಟೆ ತುಂಬ್ಸ್ಕಳ್ಳಿ

ನಮ್ಬಸ್ವಣ್ಣ ಯೋನೇಳವ್ನಂತ
ವಸಿ ತಿಳ್ಕಳಿ
ಲಿಂಗ-ಸೈವ ಬ್ಯಾರೆ ಅಲ್ಲ
ಅರ್ಥ ಮಾಡ್ಕಳಿ
ಇಸ್ವ ಮಾನವ ಬಸ್ವಣ್ಣನ್ನ
ಬೀದಿಗ್ತರ್ಬ್ಯಾಡ್ರೋ
ಮಹಾತ್ಮನ್ನ ಮುಂದಿಟ್ಕಂಡು
ದರ್ಮ ವಡಿಬ್ಯಾಡ್ರೊ

ತಿಳ್ಕಳ್ಳಿರ್ಲೆ ಸಿವ ವಬ್ನೆ
ದ್ಯಾವ್ರು ನಮ್ಗೆಲ್ಲಾ
ಒಂದೇ ದ್ಯಾವ್ರಿಗ್ಯರ್ಡು ದರ್ಮ
ಬೇಕಾ ನಿಮ್ಗೆಲ್ಲಾ
ಭಾರ್ತವ್ವನ ಮಕ್ಳು ನಾವು
ಒಂದೇ ಅಲ್ವೇನು?
ದರ್ಮ ವಡ್ದು ದ್ವೇಸ ಕಟ್ಕಂಡ್ರೆ
ದೇಸ ಉಳಿತದೇನು?

ಮ್ಯರಿಬ್ಯಾಡ್ರೋ  ಮ್ಯರಿಬ್ಯಾಡ್ರೋ
ಅದರ್ಮುದ್ವಳ್ಗೆ ಸಿಕ್ಕಂಡು
ದರ್ಮ ದರ್ಮ ಅಂತ ನಿಮ್ಗಳ
ಮೂಳೆ ನೀವೇ ಮುರ್ಕಂಡು
ದರ್ಮುಕ್ಕಿಂತ ದೇಸ ಮೊದ್ಲು
ಮನ್ಸತ್ವನೇ ದೊಡ್ಡದ್ದು
ಕೂಡ್ಕಂಡ್ಬಾಳೋ ಸುಖುಕ್ಕಿಂತ
ನಸ್ವರ ಇನ್ನುಳ್ದಿದ್ದು

ನಮ್ಕಾಲುಕ್ಕೆ ಮುಗಿತದೇನು
ಬದ್ಕು-ಜೀವ್ನ ಯಲ್ಲಾ?
ನಮ್ಮಕ್ಳು ಕಾಲ್ಕು ಬುಟ್ಟೋಗ್ಬೇಕ
ಜಗ್ಳ-ಕದ್ನನೆಲ್ಲಾ?
ಪುಣ್ಯ ಬೂಮ್ಯಾಗೆ ಉಟ್ಟಿದೀವಿ
ಒಂದ್ಕಟ್ಟೊಟ್ಟಿಗೆ ಬಾಳನ
ಜಾತಿ,ದರ್ಮ,ದ್ವೇಸ ಮರ್ತು
ಸ್ನೇಹ ಪ್ರೀತಿ ಬ್ಯಳ್ಸನ

-------------------------------------------------------------------
                         "ಭಾವಕಣ"



Wednesday, 29 August 2018

"ನನ್ನಮ್ಮ"

ಹೊಟ್ಟೆಯಲಿ ಒದ್ದಾಗ ನೋವುಂಡು ನಕ್ಕವಳು
ಹಟ್ಟಿಯಲಿ ಬಿದ್ದಾಗ ನನ ಕೂಡಿ ಅತ್ತವಳು
ನವಮಾಸ ಹೊತ್ತವಳು
ಕಡಲಾಳದ ಮುತ್ತಿವಳು
ಬದುಕಿವಳು ಬೆಳಕಿವಳು
ಹಾಲೂಡಿದ ಹಡೆದವಳು

ಹರಿದ ಸಿರೆಗಳನುಟ್ಟೇ ಸಿರಿಯ ಕಂಡವಳು
ನಮಗುಣಿಸಿ ತಾನುಣದೆ ಮುಗುಳುನಕ್ಕವಳು
ಬರೆದೋದಲು ಬರದೆಯೂ
ಬದುಕು ಕಲಿಸಿದಳು
ಒಡಲಿವಳು ಮಡಿಲಿವಳು
ನನ್ನೆದೆಯ ಧನಿಯಿವಳು

ಕಡುಕಷ್ಠ ಬಡತನಕೆ ಎದೆಗುಂದದವಳು
ಬಿಸಿಲು ಮಳೆ ಲೆಕ್ಕಿಸದೇ ಕೂಲಿ ಮಾಡಿದವಳು
ಎದೆ ನೆತ್ತರು ಬಸಿದು ನಮ್ಮ
ಎದೆಯೆತ್ತರ ಬೆಳೆಸಿದವಳು
ನನ್ನವಳು ಕಣ್ಣಿವಳು
ಗುರಿ ತೋರಿದ ಗುರು ಇವಳು

ಸೋಲುಗಳನೇ ಗೆಲುವಾಗಿಸಿ ನೋವು ಮರೆಸಿದಳು
ಎದುರು ನಕ್ಕು ಒಳಗೆ ಬಿಕ್ಕಿ ನೊಂದು ಬೆಂದವಳು
ಬರಿಗಾಲಲೇ ತಾನು ನಡೆದು
ನಮ್ಮ ಹೆಗಲಲೊತ್ತವಳು
ನಗು ಇವಳು ಮಗುವೆ ಇವಳು
ನನ್ನಾತ್ಮವೇ ಆಗಿಹಳು ನನ್ನಮ್ಮ

Wednesday, 22 August 2018

"ಕಾಲ"

                      ೧
ನಾನಂತೂ ಎಲ್ಲಾ ಕಾಲದಲ್ಲಿಯೂ ಇದ್ದೇನೆ!
ಯಾವ ಕಾಲವೆಂದು ಕಾಲೆಳೆಯಬೇಡಿ.
ಬೇಸಿಗೆ ಚಳಿ ಮಳೆಗಾಲವಲ್ಲ
ಅಂದಿಗೊಂದಿ ಸಂದಿಕಾಲವಲ್ಲ
                      ೨
ಆಗತಾನೆ ಭುವಿ ಹುಟ್ಟಿ ಅಂಬೆಗಾಲಿಡುತ್ತಾ
ತಲೆಕೆಟ್ಟು ತಿರುಗುತ್ತಿತ್ತು, ಇತ್ತಾ?
ಇತ್ತು!ನೀರಿಲ್ಲದೆ ಬಾಯಾರಿ ಬಳಲಿ
ಯಾರಿದ್ದರು ನೀರುಣಿಸಲು ಹೇಳಿ?
ನಾನು ತಾನೆ !
ಒಡಲೊಳಂತು ಜ್ವಾಲಾಮುಖಿ,ಭೂಕಂಪನ
ಬಿರುಗಾಳಿ,ಕೆಂದೂಳಿನ ಆರ್ಭಟನ
ಬುಡಮೇಲು ಮಾಡುತ್ತಿದ್ದವು ಪೈಪೋಟಿಗೆ ಬಿದ್ದವರಂತೆ
ಉಳಿದೆಲ್ಲವೂ ಮೂಕ ಪ್ರೇಕ್ಷಕರಂತೆ
                         ೩
ನಾನು ಹೇಗೆ ಸುಮ್ಮನಿರಲಿ?ಸುಮ್ಮನಿರಲಿಲ್ಲ!
ನಾನೆ ಭುವಿಯ ಮಡಿಲಲಿ ಮಲಗಿಸಿ
ನಾನೇ ಭುವಿಗೆ ಎದೆ ಹಾಲುಣಿಸಿ,ಸಂತೈಸಿ
ಸಮಾಧಾನಿಸಿ,ಮುದ್ದಿಸಿ,ಶಾಂತಗೊಳಿಸಿ
ನೀಲಿಯಾಗಸದ ಮೇಲೆ ಮೋಡಗಳ ಸೃಷ್ಠಿಸಿ
ಮಿಂಚಿಸಿ,ಗುಡುಗಿಸಿ,ಹಿಂಡಿ
ಮಳೆಯಾಗಿಸಿ,ತಂಪಾಗಿಸಿ...
ಅಬ್ಭಾ! ಆಗಲೇ ತಾನೆ ಹಸಿರುಟ್ಟಿದ್ದು
ಭುವಿ ತಾಯಿ ಮಳೆ ತಂದೆ ಆದದ್ದು
ಮುಂದೆ...
                    ೪
ಸುರಿದ ಮಳೆ ಹನಿಗಳನು
ನದಿಯಾಗಿ ಹರಿಸಿದೆ ಜಲವನ್ನು
ಭುವಿಯುದರದೊಳು ತುಂಬಿದೆ,ಅಂತರ್ಜಲ!
ನಾನೇ ನೆಲ ಅಗೆದು ಬೆಟ್ಟ ಗುಡ್ಡಗಳ ಮಾಡಿ
ಅದೇ ಹಳ್ಳಗಳ ಸಾಗರವಾಗಿಸಿದೆ ನೋಡಿ
ನಾನೇ ನೀರನು ಬೆಟ್ಟಗಳಿಂ ಧುಮುಕಿಸಿ
ಝರಿ-ತೊರೆಗಳದರ ಮೇಲಿಂದ ಹರಿಸಿ
ಮೊದಲು ನಾನೇ ಮಿಂದೆ
ನಾನೇ ಮಳೆಬಿದ್ದ ನೆಲಕೆ ಬೀಜಗಳ ಹರಡಿ
ಗಿಡ ಮರ ಕಾಡುಗಳ ಬೆಳೆಸಿ,ಹಸಿರಾಗಿಸಿದೆ
ಉಸಿರಾಡಿಸಿದೆ
ಕಾಮನ ಬಿಲ್ಲನು ಎದೆಯೇರಿಸಿ
ಬಣ್ಣಗಳ ತೀಡಿದೆ
                             ೫
ಬೆಳಕಿರದ ಭೂಮಿ,ಯಾರು ಹಚ್ಚುವರು ದೀಪ?
ಅದು ನಾನೇ ತಾನೆ!
ಅದೆಲ್ಲೋ ಬಿಕಾರಿಗಳಂತೆ ಅಲೆಯುತ್ತಿದ್ದ
ಸೂರ್ಯ ಚಂದ್ರರ ಹುಡುಕಿ
ಹಗಲಿರುಳು ಪಾಳಿಗಿಟ್ಟವನೂ ನಾನೆ
ಎಣಿಸಲಾಗದ ನಕ್ಷತ್ರಗಳನೆಣಿಸಿ
ಒಂದೊಂದನೇ ಆಗಸದಲಿ ಜೋಡಿಸಿ
ಚುಕ್ಕಿ ಜೋಕಾಲಿಗಳ ಕಟ್ಟಿದವನುನಾನೆ
ಅದರೊಳು ಭುವಿಯಿಟ್ಟು ತೂಗಿದವನೂ ನಾನೆ
                         ೬
ನೀರಿನಲಿ ಜಲಚರಗಳ ಬಿಟ್ಟು
ಈಜಲು ಕಲಿಸಿದವ ನಾನೆ
ಜೊತೆಗೆ ಈಜಿದವನು ನಾನೆ
ಸಖಲ ಮೃಗಖಗಗಳನು ಸೃಷ್ಠಿಸಿ ನಲಿದಾಡಿದವ ನಾನೆ
ಹಕ್ಕಿಗಳಿಗೆ ರೆಕ್ಕೆಗಳನು ಕಟ್ಟಿ
ನಾನೇ ಹಾರುವುದ ಕಲಿಸಿ
ಮುಗಿಲೆತ್ತರದಲಿ ಹಾರಿಸಿ,ನಾನೂ ಹಾರಿದೆ
ಹಕ್ಕಿ ಗೂಡಲಿ ಮಲಗಿ ಹಕ್ಕಿ ಹಾಡನು ಗುನುಗಿ
ಮೊಟ್ಟೆಯೊಡೆದು ತುತ್ತು ತಿಂದವನೂ ನಾನೆ
ಮರಗಿಡದಿ ಹೂ ಹಣ್ಣು ಇಟ್ಟವನೂ ನಾನೆ
ಸವಿಜೇನನು ಮೊದಲು ಉಂಡವ ನಾನೆ
ಬೆತ್ತಲೆ ಭುವಿಗೆ ಹಸಿರು ಸೀರೆಯುಡಿಸಿ
ಜೀವ ಜಂತುಗಳ ಚಲಿಸಿ
ನಾನೇ ಉಸಿರಾಗಿಸಿದೆ,ನಾನೂ ಉಸಿರಾಡಿದೆ
ತಿಳಿನೀರನು ಹೆಪ್ಪಾಗಿಸಿ
ಹಿಮಖಂಡಗಳಿಗೆ ಬಿಳಿಯ ಬಣ್ಣ ಬಳಿದೆ
ಎಲ್ಲಕೂ ನಾನೇ ಮೊದಲು ಹತ್ತಿ ಇಳಿದೆ
                        ೭
ಮೊದಲು ನಾನೇ ನರಮಾನವನ ಹುಟ್ಟು ಕಂಡವನು
ಅರಿವಿರದ ಬೆತ್ತಲೆಗೆ ಅರಿವೆಯುಡಿಸಿ
ನಾನೆ ಅರಿವಾದವನು
ಗುಡಿಸಲು ಕಟ್ಟಿ ದೀಪ ಬೆಳಗಿದವನು
ಉಳುವ ನೆಲವಾಗಿ,ನೆಲಕೆ ನೇಗಿಲಾಗಿ
ಬಿತ್ತುವ ಬೆಳೆಯಾಗಿ,ಬೆಳೆಯ
ಮೊಳಕೆಯಾಗಿಸಿ,ಬೆಳೆಸಿ,ಬೇಯಿಸಿ
ನಾನೇ ತುತ್ತಿಟ್ಟವನು
ಹೆಣ್ಣು ಗಂಡಿನಲಿ ಭುವಿ ಮಳೆಯಷ್ಠೇ
ಪವಿತ್ರ ಪ್ರೀತಿಯ ಹುಟ್ಟಿಸಿದವನು
ಪ್ರೀತಿಯೇ ಆದವನು
                            ೮
ನಾನಂತೂ ಎಲ್ಲಾ ಕಾಲದಲ್ಲೂ ಇದ್ದವನು
ಈಗ ಇದ್ದು ಮುಂದೆಯೂ ಇರುವವನು
ಎಲ್ಲಾ ಕಾಲದಲ್ಲೂ ಇರುವ ಕಾಲ ನಾನು



Tuesday, 14 August 2018

"ಬಿಡಿಸದನುಬಂಧ"

ಈಗಷ್ಠೇ ಕತ್ತಲು ಸಂಜೆಯ ಕೊರಳು ಹಿಸುಕಿ
ಕತ್ತಲೆಯಲ್ಲೇ ಮರೆಯಾಯ್ತು!
ಚಂದಿರನೇ ಬೆಳದಿಂಗಳ ನುಂಗಿದ
ನಿನ್ನ ಬೇಸರ ನನಗೆ ಹೀಗೇ ನೋಡು
ಸ್ವರದರಿವಿರದ ಕೋಗಿಲೆಯ ಹಾಡು
ನಿನ್ನ ದುಂಡು ಮುಖದಲ್ಲಿ ನಾನು
ಸದಾ ನಗುವನ್ನೇ ಕಂಡಿದ್ದೇನೆ
ಇಂದು ನಿನ್ನಳುವನ್ನರಗಿಸಿಕೊಳ್ಳದ ಹೃದಯ
ವಾಡಿಕೆಗಿಂತ ಹೆಚ್ಚೇ ಬಡಿಯುತ್ತಿದೆ
ನೀನಂತೂ ಮೌನವಾಗಿದ್ದೀಯ
ಈಗ ಅದೇ ನನ್ನೆದೆ ಸುಡುವ ಕಿಡಿಯಾಗಿದೆ


ಈಗಷ್ಠೇ ಬಿರುಗಾಳಿಯು ತಂಗಾಳಿಯ ಎದೆಬಗೆದು
ಆಲಬ್ಬರಿಸುತ್ತಾ ಮರೆಯಾಯ್ತು
ನಿನ್ನ ನಿಶ್ಚಲ ನೋಟವು ನನ್ನೆದೆಯಲ್ಲಿ
ಎಬ್ಬಿಸಿದ ಕೋಲಾಹಲವೂ ಹೀಗೆ
ಕಡಲೇ ಅಲೆಗಳ ನುಂಗಿದ ಹಾಗೆ
ನನ್ನ ಪ್ರತಿ ಮಾತಿಗೂ ಕಿವಿಯಾಗುತ್ತಿದ್ದ ನೀನು
ನನ್ನೆಡೆಗೆ ಬೆನ್ನು ತಿರುಗಿಸಿದ್ದೀಯ
ನಿನ್ನ ಚೆಲುವನ್ನು ಮುನಿಸು ನುಂಗುತಿದೆ
ನನ್ನೆಡೆಗೆ ತಿರುಗು,ಎದೆಗೆ ಒರಗು
ನೀನಂತೂ ನನಗೆ ಪ್ರೀತಿಯೇ ಆಗಿರುವೆ
ಅದೇ ನಮ್ಮಿಬ್ಬರ ಬಂಧಿಸಿದ ಬಂಧವಾಗಿದೆ
ಬಿಡಿಸದನುಬಂಧವಾಗಿದೆ

-------------------------------------------------------------------
                          "ಭಾವಕಣ"