Friday, 24 February 2023
"ಸರ್ವೇಜನ ಸುಖಿನೋಭವಂತು"
ಬುಗುರಿಯ ತಿರುಗಂತೆ ಬದುಕು
ಅದರ ಚಾಟಿಯನಿಡಿದಿಹ ದೇವ
ತಿರುಗು ಚಲನೆಯೇ ಜೀವ
ನಿಂತರದಂತ್ಯವದು,ಬಾಳಿಷ್ಠೆ!
ಅದರಿಂದ ಕೇಳ್ ಇರುವಾಗ
ಮೆರೆಯದೆಲೇ,ಉರಿಯದೆಲೇ
ಪ್ರೀತಿ,ಕಾರುಣ್ಯದೊಳು ಮುಳುಗಬೇಕು
ಸತ್ತರೂ ಜಗದಿ ನೀಂ ಬದುಕಬೇಕು
*********
ಬದುಕದು ಸುಮ್ಮನೆಯೇ
ದಿನ-ದಿನವ ದೂಡಲಲ್ಲವದು
ಸದಾ ನೊಂದವರ ನೆರಳಾಗಲೋಸುಗ.
ಶಿವ ಕೊಟ್ಟ ಕಾಯಕವೆಂದರಿತು
ಹೆಳವರ,ಹಿರಿಯರ,ಗುರು ತಾಯ್ತಂದೆಯರ
ಸೇವೆಗರ್ಪಿಸಬೇಕು ತನುಮನವ
ಸಾರ್ಥಕವಾಗಿಸಬೇಕು ಜೀವನವ
*************
ಜ್ಞಾನಿಯಾಗಬೇಕು ಇದನರಿತು ಕೇಳು
ಪರಹೆಣ್ಣ ತಾಯಂತೆ,ಪರಸೊತ್ತ ಮಣ್ಣಂತೆ
ಜನಿಪೆಲ್ಲಾ ಜೀವಗಳನು ತನ್ನಂತೆಯೇ ಬಗೆದು
ಬೀಳದಿರು ಮೋಹ-ದುರಾಸೆಯ ಕೆಸರೊಳು
ತಾಯ್ನಾಡ ಪ್ರೇಮ,ಹೊತ್ತ ನೆಲ ಪ್ರೇಮ
ಹೆತ್ತು ಸಲಹಿದ ಪ್ರೇಮಂಗಳ ಮರೆಯದೆ
ಉಂಡಟ್ಟಿಗೆರಡು ಬಗೆಯದೆ
ನಂಬುಗೆಯ ಬೆನ್ನಿಗಿರಿಯದೇ ಬದುಕು
ಅದೇ ಬಾಳ ರಹಸ್ಯವೆಂದು ತಿಳಿದು
***********
ನ್ಯಾಯದಾದಿಯೊಳು ಕಾಯಕವು ನಿನದಿರಲಿ
ಫಲದ ಹಂಗನೆಂದೂ ಎಣಿಸದೆ ನೀ
ಇಡು ಅದ ಶಿವನ ಪಾದ ಪದ್ಮಗಳಿಗೆ
ನಿಜ ನೀಡುವ ಕೇಳ್ ಕಾಯಕಫಲದಮೃತವ!
ಕುಂದದಿರು ಕಷ್ಠಾನಷ್ಠನೋವುಗಳೆಂದು
ಕುಲುಮೆಯೊಳು ಬದುಕೆಂಬೋ ಚಿನ್ನವ ಕುದಿಸಿ
ಬಂಗಾರದೊಡವೆಯಾಗಿಸುತಿಹ ಶಿವನು
ಇರುಳಂತೆ ಮರೆಯಾಗಿ,ಬೆಳಕಂತೆ ತಾ ಮೂಡಿ
ನಗುವರಳಿಸುವ ದಿಟದಿ ನಂಬು ಜೀವ
ನಿನ್ನೊಳಗೆ ನೀಂ ಪರಮಾತ್ಮನರಿಯುತಲಿ
ಆತ್ಮಶುದ್ಧಿಯಾಗಲಿ
ಸಖಲರಾತ್ಮದೊಳು ಪರಮಾತ್ಮನೇ ನೆಲೆಸಲಿ
ಸರ್ವೇಜನೋಸುಖಿನೋಭವಂತು
----------------------------------
*ಭಾವಕಣ*
Subscribe to:
Post Comments (Atom)
No comments:
Post a Comment