Tuesday, 4 February 2014

"ನಿನ್ನೊಡಲಲಿ"

ನಿನ್ನ ಕಾಣದೆದೆಯು
ಗುಡುಗುತ್ತದೆ ಗುಡುಗಂತೆ
ಸಿಡಿಯುತ್ತದೆ ಸಿಡಿಲಂತೆ
ಬಿರುಗಾಳಿ ಮಳೆಸುರಿಸಿ
ಕಡಲುಬ್ಬಿ ಬಂದಂತೆ
ಹೂ ಕಂಪು ಉಸಿರಿರದೆ
ಬಿಸಿಲಲ್ಲಿ ಉರಿದಂತೆ

ಚಂದಿರನು ಚಿತೆಯೇರಿ
ತಾರೆಗಳು ಅಸುನೀಗಿ
ಕತ್ತಲೆಯೇ ಎದೆನಭವ
ಆಳುತಿದೆ ನೆನಪಾಗಿ
ಕಣ್ಣಹನಿ ಹೊರಬರದೆ
ಕರಗುತಿದೆ ಕಣ್ಣೊಳಗೆ
ಉಸಿರೇ ಉಸಿರಾಟ ಮರೆತು
ರೋದಿಸಿದೆ ಎದೆಯೊಳಗೆ

ನೀ ಎದುರಲಿ ನಿಂತರೆ
ನಿಲಬಹುದು ತೊಳಲಾಟ
ಈ ಮನಸಿನ ಹೊಯ್ದಾಟ
ನಸುನಗುತಾ ನಿಂತುಬಿಡು
ಕದಲದೇ ನೀ ಸುಮ್ಮನೆ
ಎದೆಹಟವ ಬಿಡಬಹುದು
ನಿನ್ನ ಮುದ್ದು ಮುಖ ಕಂಡು
ಬಿಗಿದಪ್ಪಿಬಿಡು ಒಮ್ಮೆ
ಸಾವಿರ ಜನ್ಮವ ಕಳೆವೆ
ನಗು ನಗುತ ನಿನ್ನೊಡಲಲಿ

-------------------------
"ಭಾವಕಣ"

No comments:

Post a Comment