Saturday, 22 October 2016

"ನಾ ನಡೆವ ಹಾದಿ"

ನೀವೆಲ್ಲಾ ಎಲ್ಲಿಗೆ ಹೊರಟಿದ್ದೀರೋ ಗೊತ್ತಿಲ್ಲ
ನಾನಂತೂ ಈ ಹಾದಿಯಲ್ಲಿ ನಡೆಯಲಾರೆ
ನೀವು ಹೊರಟ ದಾರಿಯಲ್ಲಿ------------
ಮಂದಿರ ಮಸೀದಿ ಚರ್ಚುಗಳಿವೆ
ಅಲ್ಲಿ ದೇವರನ್ನು ಬಂಧಿಸಿಡಲಾಗಿದೆ
ಮತ್ತು ಮನುಷ್ಯ ದೇವರಾಗಿದ್ದಾನೆ
ಯೋಚಿಸುವ ಮೆದುಳಿಗೆ
ಬೀಗ ಜಡಿಯಲಾಗಿದೆ
ಧರ್ಮಕ್ಕೆ ಘೋರಿ ಕಟ್ಟಿದ ದಾರಿಯಲ್ಲಿ
ನಾನು ನಡೆಯಲಾರೆ

ನೀವು ನಡೆವ ದಾರಿಯಲ್ಲಿ--------
ಜಾತಿಗೊಬ್ಬ ದೇವರಿದ್ದಾನೆ,ಇಲ್ಲ !
ಸೃಷ್ಟಿಸಿದ್ದೀರಿ ಅಲ್ಲವೆ?
ಧರ್ಮದುದರದಿ ಬೆಳೆಸಿದ ಮತದ ಮುಳ್ಳಿವೆ
ಗಡಿ ಬೇಲಿಗಳಿವೆ,ಇಲ್ಲ ಇಲ್ಲ?
ಮನಸ್ಸಿಗೆ  ಹಾಕಿಕೊಂಡ ಬೇಲಿಗಳಿವೆ
ಉಳ್ಳವರ ದರ್ಪದ ಜೊತೆ
ಮೇಲು ಕೀಳಿನ ಕೊಳಕಿದೆ
ಹರಿವ ನೀರು ಸುರಿವ ಮಳೆಗೂ ಕಿತ್ತಾಟವಿದೆ
ಹೆಣ್ಣನ್ನು ಭೋಗದ ವಸ್ತುವಾಗಿಸಿದ್ದಾರೆ
ಪ್ರೇಮಕ್ಕೆ ಕಾಮದ ಮುಖವಾಡವಿದೆ
ಈ ದಾರಿಯಲ್ಲಿ ನಾನು ನಡೆಯಲಾರೆ

ನೀವು ನಡೆವ ದಾರಿಯಲ್ಲಿ---------
ಪ್ರೀತಿ ಸ್ನೇಹ ಭಾವಗಳ ಸುಟ್ಟ ಬೂದಿಯಿದೆ
ಸಂಬಂಧಗಳು ಬೆಲೆಯಿಲ್ಲದ ನಾಣ್ಯಗಳಾಗಿವೆ
ಮಮತೆ ಕರುಣೆಗಳ ಕತ್ತಲೆ ನುಂಗಿದೆ
ಮನುಷ್ಯ ಮನುಷ್ಯನಲ್ಲೇ ಭೇದವಿದೆ
ದೇಶ ಭಾಷೆಗಳ ನಡುವೆ ದ್ವೇಷವಿದೆ
ಮಾನವೀಯತೆಯೇ ಮರೆಯಾಗಿದೆ
ಈ ದಾರಿಯಲ್ಲಿ ನಾನು ನಡೆಯಲಾರೆ

ನೀವು ನಡೆವ ದಾರಿಯಲ್ಲಿ--------
ಯುಧ್ದದ ಭೀತಿಗಳು ಹೊಗೆಯಾಡುತ್ತಿವೆ
ಸ್ವ ಪ್ರತಿಷ್ಠೆಗಳು ಬುಸುಗುಡುತ್ತಿವೆ
ರಾಜಕೀಯದ ಗೋಸುಂಬೆಗಳಿವೆ
ಪಂಥಗಳ ಸಮರ್ಥನೆಗಳಿವೆ
ಸಮಾನತೆಯನ್ನು ಹೂಳಲಾಗಿದೆ
ಈ ದಾರಿಯಲ್ಲಿ ನಾನು ನಡೆಯಲಾರೆ

ನೀವೆಲ್ಲಾ ಎಲ್ಲಿಗೆ ಹೊರಟಿದ್ದೀರೋ ಗೊತ್ತಿಲ್ಲ ?
ಇಲ್ಲೊಂದು ದಾರಿಯಿದೆ!!!
ಕಣ್ಣ ಕವಿದ ಪೊರೆ ಸರಿಸಿ ನೋಡಿ
ಇದು ಸತ್ಯದ ಹಾದಿ ಸಮಾನತೆಯ ಹಾದಿ
ಇಲ್ಲಿ ಪ್ರೀತಿಯ ಸವಿಯಿದೆ
ಪ್ರೇಮದ ಬೆಳಕಿದೆ ಸ್ನೇಹದ ಸಿಹಿಯಿದೆ
ಸಂಭಂದಗಳಲ್ಲಿ ಬಂಧಗಳು ಬೇರೂರಿ
ಆಕಾಶಕ್ಕೂ ಹರಡಿ ನೆರಳೀಯುತ್ತಿವೆ
ಇಲ್ಲಿ ಧರ್ಮಕಾರಣದ ರಕ್ತದ ಕಲೆಗಳಿಲ್ಲ
ವಾತ್ಸಲ್ಯದ ಕೆಂಗುಲಾಬಿಗಳಿವೆ
ಮನುಷ್ಯ ಮನುಷ್ಯನನ್ನು ಪ್ರೀತಿಸುತ್ತಾನೆ
ಇಲ್ಲಿ ದೇವರು ಎಲ್ಲರೆದೆಯಲ್ಲೂ ಇದ್ದಾನೆ
ಹಾಗು ಒಬ್ಬನೇ ಆಗಿದ್ದಾನೆ
ಇದು ಬುದ್ಧ ಬಸವ ಭೀಮ ರಾಮ ನಡೆದ ಹಾದಿ
ಇದು ಮಾನವತೆಯ ಹಾದಿ
ನಾನು-ನೀವು ಕೂಡಿ ಸಾಗಬೇಕಿರುವ ಹಾದಿ


-----------------------------------
                    "ಭಾವಕಣ"

No comments:

Post a Comment