Friday, 4 December 2015

" ವಿದ್ಯಾ ದೇವತೆ "

ನಿನ್ನ ಕರಗಳಲಿ ನಲಿವ
ಅಕ್ಷರ ನಾನು
ನನ್ನ ಎದೆಯಲಿ ಹೊಳೆವ
ವಿದ್ಯಾದೀವಿಗೆ ನೀನು
ತೊದಲು ನುಡಿಗಳಿಗೆ
ಪದವ ಹೆಣೆದವಳೆ
ಅಜ್ಞಾನದ ಒಂಟಿ ಹಾದಿಯಲಿ
ಅರಿವಾಗಿ ತಾ ಜೊತೆ ನಡೆದವಳೆ

ನನ್ನ ವಿದ್ಯಾ ಹಸಿವನು
ಅನುದಿನವು ತಣಿಸಿ
ಕಂಡಿರದ ಕಾವ್ಯಗಳ
ಕಣ್ಣೆದುರು ಕುಣಿಸಿ
ಕಲ್ಲ ಕಡೆದು ಶಿಲೆಯಾಗಿಸಿ
ಬದುಕ ರೂಪಿಸಿದವಳೆ
ನಮಗೆ ಮುಡಿಪಾದವಳೆ

ಕರುಣಿಸಿದೆ ಒಲವ ಪದವ
ಮನದಿ ತುಂಬಿ ಜ್ಞಾನದಾಹವ
ನುಡಿದಿದೆ ಮನ ನಿನ್ನ ಪದವ
ಎದೆಯ ನಾಡಿ ಹಿಡಿತ ಮಿಡಿದು
ಎದೆಯೊಳು ನೀ ಬಿತ್ತಿದ
ದಿವ್ಯ ಪದಗಳು ಮೊಳೆತು
ಗಿಡವಾಗಿ,ಮರವಾಗಿ
ಹಸಿರುಟ್ಟುನಿಂತಿವೆ
ನನ್ನೊಡಲನು ಬೆಳಗಿವೆ

ತಾಯೇ---
ನಿನ್ನ ವಿದ್ಯಾದಂಡವ
ತೀಡು ಎನ್ನ ತಲೆಯ ಮೇಲೆ
ಎನ್ನ ಮಸ್ತಕದೊಡಲ ಗರ್ಭ
ಸಿಡಿದು ಬೆಳಗಲಿ ತಾಯಿ
ನಿನ್ನ ಚರಣಗಳಡಿಯಲಿ

---------------------------------
                                        "ಭಾವಕಣ" 

No comments:

Post a Comment