Friday, 4 December 2015

" ಮೌನರಾಗ "

ಮನಸ ಕನಸಿಗೆ ಮೌನವೆ ಆಸರೆ
ಎದೆ ಮಿಡಿದ ಭಾವಕೆ ಮೌನದ ಸೆರೆ
ಏಕೊ ಏನೊಸರಿಯದೀ ಮೂಕ ತೆರೆ
ದೂರಕೆ ಕರೆದಿವೆ ನೆನಪಿನಾಳದ ಕರೆ

ಸಾಗರದಲೆಗಳಲಿ ಮೆಲ್ಲನೆ ತೇಲುವ ಹಡಗು
ಬಾನಲಿ ಕಾಮನಬಿಲ್ಲಿನ ಮೌನದ ಬೆಡಗು
ಬಿರುಗಾಳಿಗೂ ಕದಲದ ಮಲೆಗಳ ಮೌನ ಬೆರಗು
ಬಿಕ್ಕುತ್ತಿದೆ ಮೌನಮುರಿಯದ ಶಿಲೆಗಳ ಕೊರಗು

ಮನದ ಪುಟದಿ ತುಂಬಿವೆ ಮೌನ ನೆನಪುಗಳು
ದೂರದಿ ಪಿಸುಗುಡುತ್ತಿವೆ ಮುಗ್ಧ ಭಾವಗಳು
ಮಾತಿದ್ದರೂ ಮೌನ ತಳೆದಿವೆ ಹೃದಯಗಳು
ಬೆನ್ನಿಗೆ ಬೆನ್ನಂಟಿಸಿ ಕುಳಿತಿವೆ ಮನಗಳು

ಬಾಯ್ಬಿಡದ ಕಣ್ಣೀರು ಬೇಡಿದೆ ಪ್ರೀತಿ ಸೆರಗ
ಬಯಸಿದೆ ನಿಶ್ಚಲ ಹೃದಯ ವಾತ್ಸಲ್ಯದ ಮೆರುಗ
ಕಾಣದ ದಿಕ್ಕಿಗೆನ್ನ ಸೆಳೆದಿದೆ ಮೋಹನರಾಗ
ಕೊನೆಗೂ ಮುರಿಯಲಿ ನನ್ನೆದೆಯ ಮೌನರಾಗ

-----------------------------------------
                                            " ಭಾವಕಣ "

No comments:

Post a Comment